ಕ್ಲೀವ್‍ಲೆಂಡ್

ಅಮೆರಿಕ ಸಂಯುಕ್ತಸಂಸ್ಥಾನದ ಒಹಾಯೊ ರಾಜ್ಯದ ಒಂದು ನಗರ. ಈರಿ ಸರೋವರದ ಒಂದು ರೇವುಪಟ್ಟಣ. ಕೈಹಾಗ ನದಿಯ ಮುಖದ ಮೇಲಿದೆ. ಜನಸಂಖ್ಯೆ 8,10,858 (1965). ಕ್ಲೀವ್‍ಲೆಂಡ್ ನಗರ ಪ್ರದೇಶದಲ್ಲಿ 24 ನಗರಗಳು ಮತ್ತು 53 ಹಳ್ಳಿಗಳುಂಟು. ಅವುಗಳಲ್ಲಿ ಕ್ಲೀವ್‍ಲೆಂಡ್ ಹೈಟ್ಸ್, ಈಸ್ಟ್ ಕ್ಲೀವ್‍ಲೆಂಡ್, ಷೇಕರ್ ಹೈಟ್ಸ್, ಲೇಕ್‍ವುಡ್, ಯೂಕ್ಲಿಡ್, ಬೆಡ್‍ಫೋರ್ಡ್, ಪಾರ್ಮ ಮತ್ತು ಯೂನಿವರ್ಸಿಟಿ ಹೈಟ್ಸ್ ಮುಖ್ಯವಾದುವು. ಪೋಲಿಷ್, ಚೆಕೊಸ್ಲವಾಕ್, ಇಟಾಲಿಯನ್, ಹಂಗರಿಯನ್, ಜರ್ಮನ್, ಯೂಗೊಸ್ಲಾವ್, ರಷ್ಯನ್, ಆಸ್ಟ್ರಿಯನ್ ಮುಂತಾದ ಜನ ಇಲ್ಲಿ ಅಧಿಕ ಸಂಖ್ಯೆಗಳಲ್ಲಿದ್ದಾರಾದರೂ ಅವರ ವೈಶಿಷ್ಟ್ಯಗಳಿಗೆ ಕುಂದುಂಟಾಗುವ ರೀತಿಯಲ್ಲಿ ಐಕ್ಯ ಸಾಧನೆಯಾಗಿದೆ. ಕ್ಲೀವ್‍ಲೆಂಡ್ ಒಂದು ಮುಖ್ಯ ವ್ಯಾವಹಾರಿಕ, ಕೈಗಾರಿಕಾ ಹಾಗೂ ಸಾಂಸ್ಕøತಿಕ ಕೇಂದ್ರ.

	ಕ್ಲೀವ್‍ಲೆಂಡಿನಲ್ಲಿ ಅಲ್ಯೂಮಿನಿಯಂ, ವಿದ್ಯುತ್ ಉಪಕರಣ, ಟ್ರಾಕ್ಟರ್, ಬಸ್, ವಿಮಾನಗಳ ಬಿಡಿಭಾಗಗಳು ಮುಂತಾದ ಕೈಗಾರಿಕೆಗಳಿವೆ. ಇದು ಒಹಾಯೊ ರಾಜ್ಯದ ಮುಖ್ಯ ತೈಲಶುದ್ಧೀಕರಣ ಕೇಂದ್ರ. ಮೂಲಭೂತ ರಾಸಾಯನಿಕಗಳು, ಬಣ್ಣಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ಕೈಗಾರಿಕೆಗಳಿಗೂ ಈ ನಗರ ಪ್ರಸಿದ್ಧಿ ಪಡೆದಿದೆ. ಕ್ಲೀವ್‍ಲೆಂಡ್ ನಗರಪ್ರದೇಶದಲ್ಲಿ ಒಟ್ಟು 400 ಸಂಶೋಧನಾಲಯಗಳುಂಟು.

	ಕ್ಲೀವ್‍ಲೆಂಡಿನ ಪ್ರಮುಖ ವಿದ್ಯಾಸಂಸ್ಥೆಯೆಂದರೆ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯ. ಇದು ಸ್ಥಾಪಿತವಾದ್ದು 1826ರಲ್ಲಿ. ಇದರ ಕಕ್ಷೆಯಲ್ಲಿ ಅನೇಕ ಕಾಲೇಜುಗಳು ಸ್ಥಾಪಿತವಾಗಿವೆ.

	ಕೇಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (1880), ಜಾನ್ ಕ್ಯಾರಲ್ ವಿಶ್ವವಿದ್ಯಾಲಯ, ಪುರುಷರ ರೋಮನ್ ಕೆಥೊಲಿಕ್ ವಿಶ್ವವಿದ್ಯಾಲಯ (1886), ಬಾಲ್ಡ್‍ವಿನ್ ವಾಲೇಸ್ ಕಾಲೇಜ್(1845), ಕ್ಲೀವ್‍ಲೆಂಡ್ ಕಲಾ ಸಂಸ್ಥೆ (1882), ಕ್ಲೀವ್‍ಲೆಂಡ್ ಸಂಗೀತ ಸಂಖ್ಯೆ (1920), ಕ್ಲೀವ್‍ಲೆಂಡ್-ಮಾರ್ಷಲ್ ನ್ಯಾಯಶಾಸ್ತ್ರ ಶಾಲೆ (1897) ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳಿವೆ.

	ಕ್ಲೀವ್‍ಲೆಂಡಿನಲ್ಲಿ ಕಲಾ ವಸ್ತು ಸಂಗ್ರಹಾಲಯ, ಪ್ರಕೃತಿ ವಿಜ್ಞಾನ ವಸ್ತು ಸಂಗ್ರಹಾಲಯ, ಆರೋಗ್ಯ ವಸ್ತುಸಂಗ್ರಹಾಲಯ, ಅಲೆನ್ ಮೆಮೋರಿಯಲ್ ವೈದ್ಯಕ ಗ್ರಂಥಾಲಯ ಮುಂತಾದ ಅನೇಕ ಸಾರ್ವಜನಿಕ ಸಂಸ್ಥೆಗಳಿವೆ. ಕ್ಲೀವ್‍ಲೆಂಡಿನಲ್ಲಿ ಅನೇಕ ನಾಟ್ಯಶಾಲೆಗಳುಂಟು. ವರ್ಷವಿಡೀ ಅಲ್ಲಿ ವೃತ್ತಿರಂಗಭೂಮಿಯ ನಟರೂ ಕಲಾ ವಿಲಾಸಿಗಳೂ ನಾಟಕ ಪ್ರದರ್ಶಿಸುತ್ತಿರುತ್ತಾರೆ. ಇಲ್ಲಿರುವ ಅನೇಕ ಉದ್ಯಾನಗಳಲ್ಲಿ ಸ್ಥಳೀಯ ನಿಸರ್ಗ ಸೌಂದರ್ಯವನ್ನು ಹಾಗೆಯೇ ರಕ್ಷಿಸಲಾಗಿದೆ. ಬಿಗ್ ಕ್ರೀಕ್‍ನಲ್ಲಿಯ ಪ್ರಾಣಿಸಂಗ್ರಹಾಲಯ ಪ್ರಸಿದ್ಧವಾದ್ದು. ಕ್ಲೀವ್‍ಲೆಂಡ್ ನಗರ ಪ್ರದೇಶದಲ್ಲಿ ಸುಮಾರು 60 ಆಸ್ಪತ್ರೆಗಳುಂಟು.
	ಸಾಹಸಿ ಉದ್ಯಮಶೀಲರು ಮೊದಲಿಂದಲೂ ಈ ಪ್ರದೇಶವನ್ನು ಸದುಪಯೋಗ ಪಡಿಸಿಕೊಂಡು ಬಂದಿದ್ದಾರೆ. ಈ ಪ್ರದೇಶದ ಮಹತ್ತ್ವವನ್ನು ಮೊದಲಿಗೆ ಕಂಡುಕೊಂಡಿದ್ದವರು ಇಂಡಿಯನರು. ಅವರು ಈಗಿರುವ ನಗರದಲ್ಲಿ ಸಣ್ಣಸಣ್ಣ ದಿಬ್ಬಗಳನ್ನೂ ಕೋಟೆಗಳನ್ನೂ ಕಟ್ಟಿಕೊಂಡಿದ್ದರು. ಇವರೇ ಇಲ್ಲಿಯ ಮೊಟ್ಟಮೊದಲ ನಿವಾಸಿಗಳು. ಅನಂತರ ಕೈಹಾಗದ ತಗ್ಗುಪ್ರದೇಶದಲ್ಲಿ ಇಂಡಿಯನರು ಮತ್ತು ಫ್ರೆಂಚರು ವ್ಯಾಪಾರಕೇಂದ್ರಗಳನ್ನು ಸ್ಥಾಪಿಸಿದರು.

	ಅಮೆರಿಕನ್ ಕ್ರಾಂತಿಯ ಅನಂತರ ಒಹಾಯೊ ನಗರ ಸ್ಥಾಪನೆಯಾಗಿ ಅಲ್ಲಿ ಸಂಸಾರಗಳು ನೆಲೆಸಲಾರಂಭಿಸಿರುವುದು. ಕ್ಲೀವ್‍ಲೆಂಡ್ ನಗರದ ನಕ್ಷೆ ತಯಾರಾದ್ದು 1796ರಲ್ಲಿ. 1832ರಲ್ಲಿ ಒಹಾಯೊ ಕಾಲುವೆ ನಿರ್ಮಾಣಕಾಯ ಮುಗಿದ ಮೇಲೆ ಈ ನಗರದ ಪ್ರಾಮುಖ್ಯತೆ ಹೆಚ್ಚಿತು. ಅನಂತರ ರೈಲುಮಾರ್ಗಗಳು ನಿರ್ಮಾಣವಾದುವು. ನಗರ ಶೀಘ್ರವಾಗಿ ಬೆಳೆಯಿತು.

	ಕ್ಲೀವ್‍ಲೆಂಡಿನ ನಾಗರಿಕರು ರಾಷ್ಟ್ರೀಯ ಅಂದೋಳನದಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಗುಲಾಮಗಿರಿ ರದ್ದಿಗಾಗಿ ದುಡಿದವರಿವರು. 20ನೆಯ ಶತಮಾನದ ಆರಂಭದಲ್ಲಿ ಸುಧಾರಣೆ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಕಾರ್ಯಗಳು ನಡೆದುವು. ಧರ್ಮಕಾರ್ಯಗಳಿಗಾಗಿ ಸಾಮೂಹಿಕ ಕ್ಷೇಮನಿಧಿಯನ್ನು ಮೊದಲಿಗೆ ಆರಂಭಿಸಿದ್ದು ಈ ನಗರದಲ್ಲಿಯೇ. ಈ ಯೋಜನೆ ಮುಂದೆ ಸಂಯುಕ್ತ ಸಂಸ್ಥಾನದ ಇತರ ರಾಜ್ಯಗಳಿಗೂ ಹರಡಿತು. ಕಾರ್ಮಿಕ ಚಳವಳಿ ಇಲ್ಲಿ ಯಾವಾಗಲೂ ಉಗ್ರವಾಗಿತ್ತು.	 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ